ಅಭಿಪ್ರಾಯ / ಸಲಹೆಗಳು

ಇಲಾಖೆಯ ಹಿನ್ನೆಲೆ

ಕರ್ನಾಟಕ ರಾಜ್ಯದಲ್ಲಿನ ತೋಟಗಾರಿಕೆ ಬೆಳವಣಿಗೆಯು ಅದ್ಭುತವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಕೌತುಕಮಯ ಸಂಗತಿಗಳು ಸಾಧನೆಗಳು ಮೈಲುಗಲ್ಲುಗಳು ಹಾಗೂ ಹೆಮ್ಮೆಪಡುವಂತಹ ಪರಂಪರೆಯನ್ನು ಬಿಂಬಿಸುವಂತಹದ್ದಾಗಿದೆ.

ರಾಜ್ಯದಲ್ಲಿ ಹಲವಾರು ತೋಟಗಾರಿಕೆ ಬೆಳೆಗಳನ್ನು ಅನಾದಿಕಾಲದಿಂದ ಬೆಳೆಯಲಾಗುತ್ತಿದರು ಅವುಗಳ ವಾಣಿಜ್ಯ ಪ್ರಮಾಣದ ಬೇಸಾಯವು ಕೇವಲ ಎರಡೂವರೆ ಶತಮಾನಗಳ ಹಿಂದಷ್ಟೇ ಪ್ರಾರಂಭವಾಯಿತೆನ್ನಬಹುದು. ಈ ದಿಸೆಯಲ್ಲಿ ಮೊಟ್ಟಮೊದಲು ಹೆಸರಿಸಬಹುದಾದ ಪ್ರಯತ್ನವು ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಅವರಿಗೆ ಸಲ್ಲುತ್ತದೆ. ಹೈದರಾಲಿಯು 1760 ರ ಸುಮಾರಿಗಿ ಬೆಂಗಳೂರಿನ ಕೋಟೆಯ ಬಳಿ ಒಂದು ಚಿಕ್ಕ ರಾಜ್ಯೋಧ್ಯಾನವನ್ನು ಅಭಿವೈದ್ಧಿ ಪಡಿಸಿದನು. ಕಾಲಾನಂತರ ಇದನ್ನು ಟಿಪ್ಪು ಸುಲ್ತಾನನು ಅನೇಕ ಜಾತಿಯ ಗಿಡಮರಗಳನ್ನು ನೆಟ್ಟು ಅಭಿವೃದ್ಧಿ ಪಡಿಸಿದನು ಈತನು ದೇಶ-ವಿದೇಶಗಳಿಂದ ಅನೇಕ ಮಹತ್ವಪೂರ್ಣ ಜಾತಿಯ ಹೂವುಗಳು, ಹಣ್ಣುಗಳು,ತರಕಾರಿಗಳು, ಮತ್ತು ಇತರ ಜಾತಿಯ ಸಸ್ಯಗಳನ್ನು ತರಿಸಿ ಲಾಲ್ ಬಾಗ್ ನಲ್ಲಿ ಬೆಳೆಸಲು ಉಪಕ್ರಮಿಸಿದನು. ದೂರದ ಪ್ರದೇಶಗಳಾದ ಮಲಕ್ಕಾ,‌ ಫ್ರಾನ್ಸ್ ದ್ವೀಪಗಳು ,(ಮಾರಿಷಸ್), ಓಮನ್, ಅರೇಬಿಯಾ, ಪರ್ಶಿಯ, ಟರ್ಕಿ, ಜಂಜಿಬಾರ್, ಪ್ರಾನ್ ಮತ್ತು ಇತರ ಅನೇಕ ಯೂರೋಪ್ ದೇಶಗಳಿಂದ ಹಲವಾರು ಅಪರೂಪದ ಸಸ್ಯ ಪ್ರಭೇದಗಳನ್ನು ಈತನು ತರಿಸಿ ಅಭಿವೃದ್ಧಿಪಡಿಸಿದನು. ಶ್ರೀರಂಗಪಟ್ಟಣ ಹತ್ತಿರದ ಗಂಜಾಂನಲ್ಲಿ ಈತ ನೊಂದು ವಿಶಾಲವಾದ ಅಂಜೂರದ ತೋಟವನ್ನು ಸಹ ಅಭಿವೃದ್ಧಿ ಪಡಿಸಿದನು. ಆಗ ಟಿಪ್ಪು ತರಿಸಿ ಅಭಿವೃದ್ಧಿಪಡಿಸಿದ ಹಲವಾರು ತೋಟಗಾರಿಕೆ ಸಸ್ಯಗಳು ನಂತರದ ದಿನಗಳಲ್ಲಿ ಮೈಸೂರು ಪ್ರಾಂತ್ಯದಲ್ಲಿ ವಾಣಿಜ್ಯ ಪ್ರಮಾಣದ ಬೆಳೆಗಳಾಗಿ ಹೊರಹೊಮ್ಮಿದವು ಎಂಬುದನ್ನು ನಾವು ಗಮನಿಸತಕ್ಕ ವಿಷಯವಾಗಿದೆ. ಉದಾ: ಹಿಪ್ಪು ನೇರಳೆ (ರೇಷ್ಮೆ ಕೃಷಿಗಾಗಿ) ದ್ರಾಕ್ಷಿ,ದಾಳಿಂಬೆ,ಗುಲಾಬಿ ಮತ್ತು ಅನೇಕ ಐರೋಪ್ಯ ತರಕಾರಿ ಬೆಳೆಗಳು.

ಟಿಪ್ಪುಸುಲ್ತಾನನ ಪತನದ ನಂತರ 1799 ರಲ್ಲಿ ಲಾಲ್ ಬಾಗ್ ಬ್ರಿಟಿಷರಿಗೆ ಹಸ್ತಾಂತರಗೊಂಡಿತ್ತು. ಹಳೆಯ ದಾಖಲಾತಿಗಳ ಪ್ರಕಾರ ಮೇಜರ್ ವಾಫ್ ಎಂಬ ಸೇನಾ ಸಸ್ಯಶಾಸ್ತ್ರಜ್ಞರು 1819 ರವರೆಗೆ ತನ್ನ ಉಸ್ತುವಾರಿಯಲ್ಲಿ ಇಟ್ಟುಕೊಂಡಿದ್ದನು. ತದನಂತರ ಈ ಉದ್ಯಾನವನವನ್ನು ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಆದ ಮಾರ್ಕಸ್ ವಾರನ್ ಹೇಸ್ಟಿಂಗ್ಸ್ ಗೆ ಬಳುವಳಿಯನ್ನಾಗಿ ನೀಡಿದ್ದನು. ಹೇಸ್ಟಿಂಗ್ಸ್ ಅನ್ನು ಕಲ್ಕತ್ತಾದ ರಾಯಲ್ ಬಟಾನಿಕಲ್ ಉದ್ಯಾನವನದ ಮೇಲ್ವಿಚಾರಕರಿಂದ ಡಾ, ವಾಲಿಚರನ್ನು ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟದ ಉಪ ಮೇಲ್ವಿಚಾರಕರನ್ನಾಗಿ ನೇಮಿಸಿದನು. ಈ ವ್ಯವಸ್ಥೆಯು 1831 ರವರೆಗೆ ಮುಂದುವರೆಯಿತು.

 

1831 ರಲ್ಲಿ ಮೈಸೂರು ಪ್ರಾಂತ್ಯವು ಬ್ರಿಟಿಷರ ಆಳ್ವಿಕೆಗೊಳಪಟ್ಟ ನಂತರ ಆಂದಿನ ಮೈಸೂರಿನ ಮುಖ್ಯ ಆಯುಕ್ತರಾದ ಸರ್ ಮಾರ್ಕ್ ಕಬ್ಬನ್ ರವರ ಸುಪರ್ದಿಗೆ ಒಳಪಟ್ಟಿತ್ತು. 1839 ರಲ್ಲಿ ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟದ ಕೆಲಸ ಕಾರ್ಯಗಳನ್ನು ಕಲ್ಕತ್ತಾದ ಅಗ್ರಿ ಹಾರ್ಟಿಕಲ್ಚರಲ್ ಸೊಸೈಟಿಗೆ‌ ಹಸ್ತಾಂತರಿಸಲಾಯಿತು.1842 ರಲ್ಲಿ ಈ ಸೊಸೈಟಿಯು ಸ್ಥಗಿತಗೊಂಡ ನಂತರ ಮತ್ತೆ 1856 ರವರೆಗೆ ಮೈಸೂರಿನ ಮುಖ್ಯ ಆಯುಕ್ತರ ನಿರ್ವಹಣೆಗೆ ಒಳಪಡಿಸಲಾಯಿತು.

ಲಾಲ್ ಬಾಗ್ ಅನ್ನು 1856ರ ಆಗಸ್ಟ್‌ ನಲ್ಲಿ ಸರ್ಕಾರಿ ಸಸ್ಯಶಾಸ್ತ್ರೀಯ ಉದ್ಯಾನವನವನ್ನಾಗಿ ನಾಮಕರಣ ಮಾಡಿ ಸಂಪೂರ್ಣವಾಗಿ ಸರ್ಕಾರದ ಸ್ವಾಯುತ್ತತೆ ಗೊಳಪಡಿಸಲಾಯಿತು. ಸಸ್ಯಶಾಸ್ತ್ರೀಯವಾಗಿ ಮಹತ್ವವುಳ್ಳ ಜಾತಿಯ ಮರಗಳನ್ನು ಸಂರಕ್ಷಿಸಲು ಹಾಗೂ ಉದ್ಯಾನವನ್ನು ಆಕರ್ಷಕವಾಗಿಸಲು ಆಯುಕ್ತರ ಕಾರ್ಯದರ್ಶಿಗಳು ಬೆಂಗಳೂರು ವಿಭಾಗದ ಮೇಲ್ವಿಚಾರಕರು ಹಾಗೂ ಡಾ, ಕಿರ್ಕ್ ಪ್ಯಾಟ್ರಿಕ್ ರವರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲಾಯಿತು. ನಂತರದ ಎರಡು ವರ್ಷಗಳಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಲಾಯಿತು. ಇದಾದ ನಂತರ 1858 ರಲ್ಲಿ, ಸರ್ ವಿಲಿಯಂ ಹೂಕರ್, ನಿರ್ದೇಶಕರು ರಾಯಲ್ ಬಟಾನಿಕಲ್ ಗಾರ್ಡನ್ಸ್, ಕ್ಯೂ ರವರು ವಿಲಿಯಂ ನ್ಯೂ ರವರನ್ನು ಲಾಲ್ ಬಾಗ್ ಸಸ್ಯೋದ್ಯಾನದ ಮೇಲ್ವಿಚಾರಕ ರೆಂದು ನೇಮಿಸಿದರು.

ಲಾಲ್ ಬಾಗ್ ಸಸ್ಯೋದ್ಯಾನ ದಲ್ಲಿ ಹೆಸರಿಸಬಹುದಾದ ಸಾಧನೆಯು 1874 ರಲ್ಲಿ ಜಾನ್ ಕ್ಯಾಮರಾನ್ ರವರನ್ನು ಈ ತೋಟದ ಮೇಲ್ವಿಚಾರಕರೆಂದು ನೇಮಿಸಿದ ನಂತರ ಪ್ರಾರಂಭವಾಯಿತು ಎನ್ನಬಹುದು. ಇವರ ಅವಧಿಯಲ್ಲಿ ಲಾಲ್ ಬಾಗ್‌ ನ ವಿಸ್ತರಣೆ ಮತ್ತು ವ್ಯವಸ್ಥಿತ ಅಭಿವೃದ್ಧಿಗಳೆರಡೂ ಕೈಗೂಡಿದವು.19 ನೇ ಶತಮಾನದ ಅಂತ್ಯದ ವೇಳೆಗೆ ಜಾನ್ ಕೆಮೆರಾನ್ ರ ಪ್ರಯತ್ನದಿಂದಾಗಿ ಲಾಲ್ ಬಾಗ್ ನ ಮೂಲ ವಿಸ್ತಾರವು 45 ಎಕರೆಯಿಂದ 100ಎಕರೆ ಗೆ ವಿಸ್ತರಿಸಲ್ಪಟ್ಟಿತು. ವಿಶ್ವವಿಖ್ಯಾತ ಗಾಜಿನ ಮನೆಯ ನಿರ್ಮಾಣವನ್ನು ಇಲ್ಲಿ 1889 ರಲ್ಲಿ ಕೈಗೊಳ್ಳಲಾಯಿತು. ಮೈಸೂರು ಪ್ರಾಂತ್ಯದಲ್ಲಿ ಅನೇಕ ಹಣ್ಣು, ತರಕಾರಿ ಮತ್ತು ಪ್ಲಾಂಟೇಶನ್ ಬೆಳೆಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಬೆಳೆಯುವುದನ್ನು ಪ್ರೋತ್ಸಾಹಿಸಿದ ಕೀರ್ತಿ ನಿಸ್ಸಂದೇಹವಾಗಿ ಇವರಿಗೆ ಸಲ್ಲುತ್ತದೆ. ಈ ಎಲ್ಲಾ ಕಾರಣಗಳಿಂದಲೇ 1874 ರಿಂದ 1908 ರವರೆಗೆ ಜಾನ್ ಕೆಮೆರಾನ್ ರು ಪೂರೈಸಿದ ಸೇವಾವಧಿಯನ್ನು ಲಾಲ್ ಬಾಗ್ ನಲ್ಲಿ ಸಸ್ಯಗಳನ್ನು ಪರಿಚಯಿಸಿದ 'ಸುವರ್ಣ ಯುಗ' ವೆಂದು ಕರೆಯಲಾಗುತ್ತಿದೆ.

 

ಇವರ ತರುವಾಯ 1908-1912 ರ ಅವದಿಗೆ ಲಾಲ್ ಬಾಗ್ ನ ನಿರ್ವಹಣೆಯನ್ನು ಜಿ. ಹೆ. ಕೈಂಬಿಗಲ್ ರವರು 1908 ರಲ್ಲಿ ವಹಿಸಿಕೊಂಡರು. ಇವರು ಲಾಲ್ ಬಾಗ್ ಉದ್ಯಾನವನದಲ್ಲಿ ಮತ್ತು ಮೈಸೂರು ಪ್ರಾಂತ್ಯದಲ್ಲಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿರುವರು. ಇವರು ಸಹ ತಮ್ಮ ಪೂರ್ವಾಧಿಕಾರಿ ಗಳಂತೆ ಲಾಲ್ ಬಾಗ್ ನಲ್ಲಿ ಅನೇಕ ದೇಶೀಯ ಮತ್ತು ವಿದೇಶೀಯ ಸಸ್ಯ ಪ್ರಭೇದಗಳನ್ನು ತರಿಸಿ ನಡೆಸಿ ಸುಂದರಿ ಕರಣ ಗೊಳಿಸಿದರು ಹಾಗೂ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಅನೇಕ ಸುಂದರ ತೋಟಗಳನ್ನು ಮತ್ತು ಉದ್ಯಾನವನಗಳನ್ನು ರಚಿಸುವುದಕ್ಕೆ ಒತ್ತು ಕೊಟ್ಟರು. ಕೃಷ್ಣರಾಜಸಾಗರ ಜಲಾಶಯದ ಬದಿಯಲ್ಲಿ ವಿಶ್ವವಿಖ್ಯಾತ ಬೃಂದಾವನ ಉದ್ಯಾನವನವನ್ನು ಪ್ರಾರಂಭಿಸಿದವರು ಸಹ ಇವರೇ. ಕೈಂಬಿಗಲ್ ರವರು ಮೈಸೂರು ಉದ್ಯಾನ ಕಲಾ ಸಂಘವನ್ನು ಪ್ರಾರಂಭಿಸಿ ಈ ಸಂಘದ ಮೂಲಕ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನಗಳನ್ನು ನಿಯಮಿತವಾಗಿ ನಡೆಸುವುದಕ್ಕೆ ಚಾಲನೆ ನೀಡಿದರು. ಇವರ ಅವಧಿಯಲ್ಲಿ ಯೇ ಲಾಲ್ ಬಾಗ್ ನಲ್ಲಿ ವಾಣಿಜ್ಯ ಸಸ್ಯಗಳ ಬ್ಯೂರೋ ಮತ್ತು ತೋಟಗಾರಿಕೆ ತರಬೇತಿ ಕೇಂದ್ರಗಳು ಪ್ರಾರಂಭಿಸಲ್ಪಟ್ಟ ವು. ಇವರು ಇಲಾಖೆಯಲ್ಲಿ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿ 1932ರಲ್ಲಿ ಸೇವಾ ನಿವೃತ್ತರಾದರು.

ಇವರ ನಂತರ ಹೆಚ್. ಸಿ. ಜವರಾಯ ರವರು 1932 ರಲ್ಲಿ ಲಾಲ್ ಬಾಗ್ ಮತ್ತು ತೋಟಗಾರಿಕೆ ಇಲಾಖೆ ಗಳ ನಿರ್ವಹಣೆಯನ್ನು ಕೈಗೆತ್ತಿಕೊಂಡರು. ಇವರು ಲಂಡನ್ನಿನ ರಾಯಲ್ ಬಟಾನಿಕಲ್ ಗಾರ್ಡನ್ ಕ್ಯೂನಲ್ಲಿ ತರಬೇತಿಯನ್ನು ಪಡೆದವರಂತೆರಾಗಿದ್ದರು. ಇವರು ಮೈಸೂರು ರಾಜ್ಯದಲ್ಲಿ ತೋಟಗಾರಿಕೆಯ ಸರ್ವತೋಮುಖ ಅಭಿವೃದ್ಧಿಗೆ ಭದ್ರವಾದ ಬುನಾದಿ ಹಾಕಿದರು. 1938 ರಲ್ಲಿ ಬೆಂಗಳೂರಿನ ಹೆಸರುಘಟ್ಟದಲ್ಲಿ ಪ್ರಾರಂಭಿಸಲ್ಪಟ್ಟ ಹಣ್ಣು ಸಂಶೋಧನಾ ಕೇಂದ್ರದಲ್ಲಿ ಹಣ್ಣಿನ ಬೆಳೆಗಳ ಹೊಂದಾಣಿಕೆಯ ಬಗ್ಗೆ ಬೆಳಕು ಚೆಲ್ಲುವ ಸಂಶೋಧನೆಯನ್ನು ಪ್ರಾರಂಭಿಸಿದರು. ಇವರ ಅವಧಿಯಲ್ಲಿಯೇ 1942 ರಲ್ಲಿ ತೋಟಗಾರಿಕೆ ಇಲಾಖೆಯ ಮೊಟ್ಟಮೊದಲ ತೋಟಗಾರಿಕೆ ಕ್ಷೇತ್ರವನ್ನು ಮದ್ದೂರಿನಲ್ಲಿ ಸ್ಥಾಪಿಸಲಾಯಿತು ಹಾಗೂ ಈ ಕ್ಷೇತ್ರದಲ್ಲಿ ತರಕಾರಿ ಬೀಜ ಮತ್ತು ಇತರ ಸಸ್ಯ ಸಾಮಗ್ರಿಗಳನ್ನು ಉತ್ಪಾದಿಸಿ ರೈತರಿಗೆ ನೀಡುವುದು, ಹಣ್ಣಿನ ಬೆಳೆಗಳ ಬಗ್ಗೆ ರೈತರಿಗೆ ಪ್ರಾತ್ಯಕ್ಷತೆ ಏರ್ಪಡಿಸುವುದು, ಇತ್ಯಾದಿ ಸ್ತುತ್ಯ ಕಾರ್ಯಗಳನ್ನು ಕೈಗೊಳ್ಳಲಾಯಿತು. ಇವರು 1944 ರಲ್ಲಿ ಸೇವಾ ನಿವೃತ್ತರಾದರು.

ಹೆಚ್. ಸಿ. ಜವರಾಯರವರು ನಂತರ ಕೆ. ನಂಜಪ್ಪನವರು ಲಾಲ್ ಬಾಗ್ ಮತ್ತು ತೋಟಗಾರಿಕೆ ಇಲಾಖೆಗಳ ನಿರ್ವಹಣೆಯನ್ನು ಕೈಗೆತ್ತಿಕೊಂಡರು. ಇವರು ತಮ್ಮ ಹಿಂದಿನಿಂದಲೂ ಸಾಗಿ ಬಂದ ಪರಂಪರೆಯನ್ನು ಮುಂದುವರೆಸಿದಲ್ಲದೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿದರು.

ಡಾ, ಎ. ಹೆಚ್. ಮರಿಗೌಡ ರವರು 1951ರಲ್ಲಿತೋಟಗಾರಿಕೆ ಮೇಲ್ವಿಚಾರಕರಾಗಿ ನಿಯುಕ್ತಿಗೊಂಡ ನಂತರ ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಕಾರ್ಯಗಳು ಅಭೂತಪೂರ್ವವಾದ ರೀತಿಯಲ್ಲಿ ನಡೆದವು. 1963ರಲ್ಲಿ ಸ್ವತಂತ್ರ ತೋಟಗಾರಿಕೆ ಇಲಾಖೆಯು ಅಸ್ತಿತ್ವಕ್ಕೆ ಬಂದು ಇವರ ಹುದ್ದೆಯನ್ನು ತೋಟಗಾರಿಕೆ ನಿರ್ದೇಶಕರು ಹುದ್ದೆಗೆ ಪರಿವರ್ತಿಸಲಾಯಿತು. ಈ ಮೊದಲು ಕೃಷಿ ಇಲಾಖೆ ಯಡಿಯಲ್ಲಿ ಇದ್ದಂತಹ ಅನೇಕ ತೋಟಗಾರಿಕೆ ಯೋಜನೆಗಳು ಈ ಹೊಸ ಇಲಾಖೆಗೆ ವರ್ಗಾಯಿಸಲ್ಪಟ್ಟವು.

1965 ರಲ್ಲಿ ತೋಟಗಾರಿಕೆ ಇಲಾಖೆಯ ಪುನರ್ ರಚನೆ ಆದ ನಂತರ ಅನೇಕ ಹೊಸ ಹುದ್ದೆಗಳು ಸೃಷ್ಟಿಸಲ್ಪಟ್ಟವು. ಇದರಿಂದಾಗಿ ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಕಾರ್ಯಗಳು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ನಡೆಯುವಂತಾದವು. ಇದೇ ವೇಳೆಗೆ ಇನ್ನೂ ಹಲವಾರು ಹೆಚ್ಚಿನ ಯೋಜನೆಗಳು ಮಂಜೂರು ಮಾಡಲ್ಪಟ್ಟವು.1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾಗಿ ಹೊಸದಾಗಿ ಸೃಷ್ಟಿಸಲ್ಪಟ್ಟ ವಿಶಾಲ ಮೈಸೂರು ರಾಜ್ಯದ ಎಲ್ಲಾ 19 ಜಿಲ್ಲೆಗಳಿಗೆ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳು ವಿಸ್ತರಿಸಲ್ಪಟ್ಟವು. ಆದ್ದರಿಂದ ರಾಜ್ಯದಲ್ಲಿ ಸಣ್ಣದಾಗಿ ಕಾರ್ಯನಿರ್ವಹಿಸುತ್ತಿದ್ದ ತೋಟಗಾರಿಕೆ ಇಲಾಖೆಯನ್ನು ಒಂದು ಪ್ರಮುಖ ಅಭಿವೃದ್ಧಿ ಇಲಾಖೆ ಎಂದು ಪರಿವರ್ತಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಯಶಸ್ಸು ಇವರದಾಯಿತು.

ಡಾ, ಎಂ. ಹೆಚ್ ಮರಿಗೌಡ ರವರು ತಮ್ಮ ಸೇವಾವಧಿಯಲ್ಲಿ ತೋಟಗಾರಿಕೆಯನ್ನು ಹಳ್ಳಿಗಾಡುಗಳಿಗೆ ಮತ್ತು ಸಾಮಾನ್ಯ ರೈತರಿಗೆ ಮುಟ್ಟಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಅಲ್ಲದೆ ತೋಟಗಾರಿಕೆ ಇಲಾಖೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಇವರು ನಾಲ್ಕು(FourLimbed) ಅಂಗಗಳ  ಮಾದರಿಯನ್ನು ಅನುಸರಿಸಿದರು. ಇದಕ್ಕಾಗಿ ಇವರು ತೋಟಗಾರಿಕೆ ಬೆಳೆಗಳ ಸಹಕಾರಿ ಮಾರಾಟ ಸಂಘ ಮತ್ತು ಸಸಿ ಬೆಳೆಗಾರರ ಸಹಕಾರಿ ಸಂಘಗಳನ್ನು ಲಾಲ್ ಬಾಗ್ ನಲ್ಲಿ ಸ್ಥಾಪಿಸಿದರು. ತಮ್ಮ ಸೇವಾವಧಿಯಲ್ಲಿ ಇವರು ಒಟ್ಟು 357 ಕ್ಷೇತ್ರ ಮತ್ತು ನರ್ಸರಿಗಳನ್ನು ಸ್ಥಾಪಿಸಿದರು. ಈ ಕ್ಷೇತ್ರ ಮತ್ತು ನರ್ಸರಿಗಳನ್ನು ಅವರು ತೋಟಗಾರಿಕೆ ಬೆಳೆಗಳನ್ನು ಮತ್ತು ತಂತ್ರಜ್ಞಾನವನ್ನು ರೈತರಿಗೆ ಪ್ರಚಾರ ಪಡಿಸುವ ಪ್ರಾತ್ಯಕ್ಷತೆ ತಾಕುಗಳನ್ನು ಆಗಿಸುವುದಕ್ಕೆ ಬಳಸಿಕೊಂಡು ಅಭಿವೃದ್ಧಿ ಸಾಧಿಸಿದರು. ಲಾಲ್ ಬಾಗ್ ನಲ್ಲಿ ರೈತರ ಪ್ರಯೋಜನ ಕ್ಕೋಸ್ಕರ ಬೀಜ ಪರೀಕ್ಷೆ ಪ್ರಯೋಗಾಲಯ, ಮಣ್ಣು ಪರೀಕ್ಷೆ ಪ್ರಯೋಗಾಲಯ ಮತ್ತು ಸಸ್ಯ ಸಂರಕ್ಷಣೆ ಪ್ರಯೋಗಾಲಯ ಗಳನ್ನು ಸ್ಥಾಪಿಸಿದರು. ಇದಲ್ಲದೆ ರಾಜ್ಯದ ಅನೇಕ ನಗರ ಮತ್ತು ಪಟ್ಟಣಗಳಲ್ಲಿ ಉದ್ಯಾನವನ ಮತ್ತು ತೋಟಗಳನ್ನು ನಿರ್ಮಿಸಿದರು.

ಲಾಲ್ ಬಾಗ್ ಸಸ್ಯೋದ್ಯಾನದ ವಿಸ್ತೀರ್ಣವನ್ನು 240 ಎಕರೆಗೆ ವಿಸ್ತರಿಸಿ ದರಲ್ಲದೆ ಅನೇಕಾನೇಕ ದೇಶಿಯ ಮತ್ತು ವಿದೇಶಿ ಸಸ್ಯ ಪ್ರಭೇದಗಳನ್ನು ತರಿಸಿ ನೆಡಿಸಿದರು. ಕರ್ನಾಟಕ ರಾಜ್ಯದಲ್ಲಿ ಒಣ  ತೋಟಗಾರಿಕೆಯ ಮುಖ್ಯ ಪ್ರವರ್ತಕರೆಂದರೆ ಡಾ, ಎಂ. ಹೆಚ್. ಮರಿಗೌಡ ರವರೇ. ಇವರು ಒಣ ತೋಟಗಾರಿಕೆಯ ತತ್ವ ಮತ್ತು ಪದ್ಧತಿಗಳನ್ನು ತಾವು ಸ್ಥಾಪಿಸಿದ ತೋಟಗಾರಿಕಾ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಪ್ರಚಾರಪಡಿಸಿದರು. ಇವರ ಈ ಮಹತ್ವಪೂರ್ಣ ಪ್ರಯತ್ನದಿಂದ ಪ್ರೇರಣೆಗೊಂಡ ರಾಜ್ಯದ ರೈತರು ತೋಟಗಾರಿಕೆಯನ್ನು ರಾಜ್ಯದ ಕಡಿಮೆ ಮಳೆ ಬೀಳುವ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಯಶಸ್ವಿಯಾಗಿ ಅಳವಡಿಸಿದರು. ಇದಲ್ಲದೆ ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಮತ್ತು ಅಂತರಬೆಳೆ ಪದ್ಧತಿಗಳನ್ನು ಸಹ ಜನಪ್ರಿಯಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ರೀತಿ ತೋಟಗಾರಿಕೆ ರಂಗಕ್ಕೆ ಡಾ, ಎಂ. ಹೆಚ್. ಮರಿಗೌಡ ರವರು ನೀಡಿದ ಅಭೂತಪೂರ್ವ ಆಯಾಮ ಮತ್ತು ಸಾಧನೆಗಳಿಂದಾಗಿ ಕರ್ನಾಟಕವು ಅಂದು ಭಾರತದ ತೋಟಗಾರಿಕೆ ರಾಜ್ಯ ಎಂಬ ಬಿರುದನ್ನು ಪಡೆಯಿತು ಹಾಗೂ ಡಾ, ಎಂ ಹೆಚ್ ಮರಿಗೌಡರ ಹೆಸರು ತೋಟಗಾರಿಕೆ ಅಭಿವೃದ್ಧಿಯ ಇತಿಹಾಸದಲ್ಲಿ ಆಮರವಾಗುವಂತಾಯಿತು.

ಕರ್ನಾಟಕವು ಇಡೀ ದೇಶದಲ್ಲಿ ಒಂದು ಪ್ರತ್ಯೇಕ ತೋಟಗಾರಿಕೆ ಇಲಾಖೆಯನ್ನು ಪಡೆದ ಮೊಟ್ಟ ಮೊದಲ ರಾಜ್ಯ ಹಾಗೂ ಕರ್ನಾಟಕದ ಈ ಕ್ರಮವನ್ನು ನಂತರ ಇತರ ಅನೇಕ ರಾಜ್ಯಗಳು ಅನುಸರಿಸಿದವು. ಈ ಅನುಕೂಲತೆ ಯಿಂದಾಗಿಯೇ ರಾಜ್ಯವು ಹಣ್ಣು ತರಕಾರಿ ತೋಟದ ಬೆಳೆಗಳು ಪುಷ್ಪಗಳ ಬೇಸಾಯದಲ್ಲಿ ಹಾಗೂ ಇತರ ದೇಶಗಳಲ್ಲಿ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡುವಲ್ಲಿ ಸಹಕಾರಿಯಾಯಿತು.

ಇತ್ತೀಚಿನ ನವೀಕರಣ​ : 11-08-2021 12:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080