ಅಭಿಪ್ರಾಯ / ಸಲಹೆಗಳು

ಕಬ್ಬನ್ ಪಾರ್ಕ್

ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ

ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ ಬ್ರಿಟೀಷರ ಕಾಲದಿಂದಲೂ ರಾಜ್ಯದ ಆಡಳಿತ ಚುಕ್ಕಾಣಿ ಸ್ಥಳಕ್ಕೆ ಅಂಟಿಕೊಂಡಿದೆ. 1791ರಲ್ಲಿ ಬ್ರಿಟೀಷರು ಬೆಂಗಳೂರನ್ನು ವಶವಡಿಸಿಕೊಂಡರು. ಮೊದಲಿಗೆ (ಲಾರ್ಡ್ ಕಾರ್ನ್ ವಾಲೀಸ್) ಆಡಳಿತ ಕಛೇರಿಗಳನ್ನು ನಡೆಸಲು ಬೆಂಗಳೂರಿನ ಟಿಪ್ಪು ಸುಲ್ತಾನ್‌ನ ಅರಮನೆಯಲ್ಲಿ  ಸ್ಥಳಾವಕಾಶ ಮಾಡಿಕೊಡಲಾಗಿದ್ದು, ತದನಂತರ ರಾಜ್ಯದ ಬೊಕ್ಕಸವನ್ನು ಬಂದೋಬಸ್ತಿನಿಂದ ಇಡಲು ಹಾಗೂ ಆಡಳಿತ ಕಛೇರಿಗಳಿಗೆ ಸ್ಥಳಾವಕಾಶದ ಕೊರತೆಯಿಂದ ದಂಡು ಪ್ರದೇಶ ಹಾಗೂ ಪೇಟೆಗೂ ಮಧ್ಯದಲ್ಲಿನ ಎತ್ತರದ ಸ್ಥಳದಲ್ಲಿ 1864-68ರಲ್ಲಿ ಸಾರ್ವಜನಿಕ ಕಛೇರಿಯನ್ನು ನಿರ್ಮಿಸಿ ಈ ಕಟ್ಟಡದಲ್ಲಿ ಆಡಳಿತ ಕಛೇರಿಗಳನ್ನು ನಡೆಸಲಾಗುತ್ತಿತ್ತು. ಸರ್ಕಾರದ 18 ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಈ ಕಟ್ಟಡವನ್ನು ಅಠಾರ ಕಛೇರಿ ಎಂದು ಕರೆಯುತ್ತಿದ್ದರು (ಪ್ರಸ್ತುತ ಈ ಕಟ್ಟಡದಲ್ಲಿ ಉಚ್ಛ ನ್ಯಾಯಾಲಯವಿದೆ).

ಈ ಕಚೇರಿಗಳ ಸಮುಚ್ಛಯದ ಪರಿಸರವನ್ನು ಸುಂದರವಾಗಿಸುವ ಸಲುವಾಗಿ ಈ ಕಛೇರಿಯ ಉತ್ತರ ಭಾಗದಲ್ಲಿನ ಸುಮಾರು 100 ಎಕರೆಗೂ ಹೆಚ್ಚಿನ ಪ್ರದೇಶವನ್ನು ಉಪಯೋಗಿಸಿಕೊಂಡು 1870ರಲ್ಲಿ ಉದ್ಯಾನವನವನ್ನು ನಿರ್ಮಿಸಲಾಯಿತು. ಅಂದಿನ ರಾಜ್ಯದ ಮುಖ್ಯ ಅಭಿಯಂತರರಾಗಿದ್ದ ಮೇಜರ್ ಜನರಲ್  ರಿಚರ್ಡ್ ಸ್ಯಾಂಕಿರವರು ಇದರ ರುವಾರಿಯಾಗಿರುತ್ತಾರೆ.

ಪ್ರಾರಂಭದಲ್ಲಿ ಈ ಉದ್ಯಾನವನವನ್ನು "ಮೀಡ್ಸ್ ಪಾರ್ಕ್" ಎಂದು ಕರೆಯುತ್ತಿದ್ದರು. ನಂತರ ಈ ಉದ್ಯಾನವನಕ್ಕೆ ಕಬ್ಬನ್ ಪಾರ್ಕ್ ಎಂದು ಹೆಸರಿಡಲಾಯಿತು. ಭಾರತ ಸ್ವಾತಂತ್ರ ಪಡೆದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಬೆಳ್ಳಿಹಬ್ಬದ (1927) ಸ್ಮರಣಾರ್ಥ ಕಬ್ಬನ್ ಉದ್ಯಾನವನಕ್ಕೆ "ಶ್ರೀ ಚಾಮರಾಜೇಂದ್ರ ಉದ್ಯಾನವನ" ಎಂದು ಸರ್ಕಾರಿ ಆದೇಶದ ಮೂಲಕ ಪುನರ್ ನಾಮಕರಣ ಮಾಡಲಾಯಿತು. ಆದಾಗ್ಯೂ, ಈ ಉದ್ಯಾನವನವನ್ನು ಜನರು "ಕಬ್ಬನ್ ಪಾರ್ಕ್" ಎಂದೇ ಕರೆಯುತ್ತಾರೆ.

ಪ್ರವಾಸಿ ತಾಣಗಳು: ರಾಜ್ಯದ ಕೇಂದ್ರ ಶಕ್ತಿ ಸ್ಥಳವಾದ ವಿಧಾನ ಸೌಧ, ವಿಕಾಸ ಸೌಧ, ಕರ್ನಾಟಕ ಉಚ್ಛ ನ್ಯಾಯಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂ, ವೆಂಕಟಪ್ಪ ಆರ್ಟ್ ಗ್ಯಾಲರಿ, ನಗರ ಕೇಂದ್ರ ಗ್ರಂಥಾಲಯ, ದ್ರಾಕ್ಷಾರಸ ಮಂಡಳಿ, ಇಂದಿರಾ ಗಾಂಧಿ ಮಕ್ಕಳ ಗ್ರಂಥಾಲಯ, ಬಾಲಭವನ, ಇಂದಿರಾಗಾಂಧಿ ಸಂಗೀತ ಕಾರಂಜಿ, ನೆಹರು ತಾರಾಲಯ.