ಅಭಿಪ್ರಾಯ / ಸಲಹೆಗಳು

ನಂದಿ ಬೆಟ್ಟ

 

ನಂದಿ ಗಿರಧಾಮ:

ಸಾವಿರಾರು ವರ್ಷಗಳ ಹಿಂದೆ ಕೂಷ್ಮಾಂಡ ಋಷಿಯು ಇಲ್ಲಿ ತಪ್ಪಸ್ಸು ಮಾಡಿದ ಕಾರಣ ಇದನ್ನು “ಕೂಷ್ಮಾಂಡಗಿರಿʼ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ಜೈನ್‌ ಮುನಿಗಳು ವಾಸವಾಗಿದ್ದರೆಂದು ಗೋಪಿನಾಥ ಬೆಟ್ಟದಲ್ಲಿ ಕೆತ್ತಿರುವ ಶಾಸನದಲ್ಲಿ ಉಲ್ಲೇಖವಿದೆ. ಗಂಗರ ಆಳ್ವಿಕೆಯ ಸಮಯದಲ್ಲಿ ಸ್ಥಳೀಯ ಪಾಳೇಗಾರರು ಪ್ರಬಲರಾಗಿ ಬೆಟ್ಟದಲ್ಲಿ ತಮ್ಮ ಆಡಳಿತ ಸ್ಥಾಪಿಸಿದ್ದರು. 9-10 ನೇ ಶತಮಾನದಲ್ಲಿ ರಾಷ್ಟ್ರಕೂಟರ ಸಾಮಂತರಾಗಿದ್ದ ಬಾಣ ವಂಶದವರು ಮತ್ತು ನೊಳಂಬ ಪಲ್ಲವರು ಸ್ಥಳೀಯ ಪಾಳೇಗಾರರ ಮೇಲೆ ಅಧಿಪತ್ಯ ಸ್ಥಾಪಿಸುತ್ತಾರೆ. ಬಾಣ ದೊರೆಗಳ ಅವಧಿಯಲ್ಲಿ ನಂದಿ ಗ್ರಾಮದಲ್ಲಿ ಶ್ರೀ ಭೋಗನಂಧೀಶ್ವರ ದೇವಾಲಯವನ್ನು ನಿರ್ಮಿಸುತ್ತಾರೆ. 11ನೇ ಶತಮಾನದ ಆರಂಭದಲ್ಲಿ ಚೋಳರು ಈ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರ ಬೆಟ್ಟದ ಮೇಲೆ ನೆಲ್ಲಿಕಾಯಿ ಬಸವಣ್ಣನ ವಿಗ್ರಹವನ್ನು ಕೆತ್ತುತ್ತಾರೆ. ಶಿವನ ವಾಹನವಾದ ನಂದಿನ ಹೆಸರಿನಲ್ಲಿ ಬೆಟ್ಟವನ್ನು ನಂದಿಬೆಟ್ಟ ಎಂದು ಕರೆಯುತ್ತಾರೆ.

 

ಇದೇ ಅವಧಿಯಲ್ಲಿ ಬೆಟ್ಟದ ಮೇಲೆ ಶ್ರೀ ಯೋಗನಂದೀಶ್ವರ ದೇವಾಲಯವನ್ನು ನಿರ್ಮಿಸುತ್ತಾರೆ. ಚೋಳ ರಾಜರ ಪೈಕಿ ಪ್ರಮುಖರಾದ ರಾಜರಾಜೇಂದ್ರ ಚೋಳ ಹಾಗೂ ಕುಲೋತ್ತುಂಗ ಚೋಳರ ಹೆಸರುಗಳನ್ನು ಇಲ್ಲಿಯ ಕೆತ್ತನೆಗಳಲ್ಲಿ ಕಾಣಬಹುದಾಗಿದೆ. 11 ರಿಂದ 14 ನೇ ಶತಮಾನಗಳ ಅವಧಿಯಲ್ಲಿ ಆಡಳಿತ ನಡೆಸುವ ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯಗಳ ದೊರೆಗಳು ಶ್ರೀ ಭೋಗನಂಧೀಶ್ವರ ಮತ್ತು ಶ್ರೀ ಯೋಗನಂದೀಶ್ವರ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವುದರಿಂದ ಈ ದೌಾಲಯಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತವೆ. ವಿಜಯನಗರ ಸಾಮ್ರಾಜ್ಯದ ದೊರೆಗಳು ದೇವಾಲಯದ ಮಂಟಪ, ಗೋಪುರ ಮತ್ತು ಪ್ರಾಕಾರಗಳನ್ನು ನಿರ್ಮಿಸುತ್ತಾರೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಸ್ಥಳೀಯ ಪಾಳೇಗಾರರು ಬೆಟ್ಟದ ಮೇಲೆ ಸುತ್ತಲೂ ಕೋಟೆ ಗೋಡೆಯನ್ನು ನಿರ್ಮಾಣ ಮಾಡುತ್ತಾರೆ. ಬೆಟ್ಟದ ಮೇಲಿರುವ ಅಮೃತ ಸರೋವರವು ಈ ಅವಧಿಯಲ್ಲಿ ನಿರ್ಮಾಣವಾಗಿರಬಹುದೆಂದು ಅಂದಾಜಿಸಲಾಗಿದೆ. ಮರಾಠ ದೊರೆ ಶಿವಾಜಿಯ ಮಗನಾದ ಸಾಂಬಾಜಿಯು ಸ್ವಲ್ಪ ಕಾಲ ಬೆಟ್ಟವನ್ನು ತನ್ನ ವಶದಲ್ಲಿರಿಸಿಕೊಂಡಿದ್ದನೆಂದು ದೇವಾಲಯದ ಗೋಡೆಯ ಮೇಲಿರುವ ಶಾಸನದಲ್ಲಿ ಸೂಚಿಸಿದೆ. ಮಾದವರಾವ್‌ ಪೇಶ್ವೆ ಹಾಗೂ ಇನ್ನಿತರ ಆಕ್ರಮಣಕಾರರು ಬೆಟ್ಟವನ್ನು ಆಕ್ರಮಿಸಿಕೊಳ್ಳಲು ಅನೇಕ ಬಾರಿ ಮುತ್ತಿಗೆ ಹಾಕುತ್ತಾರೆ. ಆದರೆ, ಭೇಧಿಸಲು ಕಠಿಣವಾದ ನಂದಿದುರ್ಗವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 1770 ರಲ್ಲಿ ನಂದಿದುರ್ಗವು ಮೈಸೂರಿನ ಹೈದರಾಲಿ ವಶಕ್ಕೆ ಬರುತ್ತದೆ. ಹೈದರ್‌ ಮತ್ತು ಅವರ ಮಗ ಟಿಪ್ಪು ಹಳೆಯ ಕೋಟೆ ಗೋಡೆಯನ್ನು ಬಲಪಡಿಸುತ್ತಾರೆ. ಟಿಪ್ಪುವು ಬೇಸಿಗೆ ಸಮಯದಲ್ಲಿ ವಿಶ್ರಾಂತಿ ಪಡೆಯಲು ಒಂದು ಬಂಗಲೆಯನ್ನು ನಿರ್ಮಾಣ ಮಾಡುತ್ತಾನೆ. ತನ್ನ ಸೈನ್ಯವನ್ನು ಬೆಟ್ಟದ ಕೆಳಗಿನ ಸುಲ್ತಾನ ಪೇಟೆಯಲ್ಲಿ ಬೀಡು ಬಿಟ್ಟು ತಾನು ಬೆಟ್ಟದ ಮೇಲೆ ವಿಶ್ರಾಂತಿ ಪಡೆಯುತ್ತಾನೆ. ಟಿಪ್ಪು ಮತ್ತು ಬ್ರಿಟೀಷರ ನಡುವೆ ನಡೆಯುವ ಕದನಗಳಲ್ಲಿ ನಂದಿದುರ್ಗವು ಬಹಳ ಪ್ರಮುಖ ಪಾತ್ರವಹಿಸುತ್ತದೆ.

 

1791 ರಲ್ಲಿ ಲಾರ್ಡ್‌ ಕಾರ್ನವಾಲೀಸನು ನಂದಿ ದುರ್ಗಕ್ಕೆ ಮುತ್ತಿಗೆ ಹಾಕಿ ಟಿಪ್ಪುವಿನ ಕಡೆಯ ಲತೀಫ್‌ ಆಲಿ ಬೇಗ್‌ ಎನ್ನುವ ನಾಯಕನನ್ನು ಸೋಲಿಸಿ, ನಂದಿಬೆಟ್ಟವನ್ನು ತನ್ನ ವಶಕ್ಕೆ ಪಡೆಯುತ್ತಾನೆ. 1799 ರಿಂದ 1808 ರವರೆಗೆ ಬೆಟ್ಟದ ಕೆಳಗಿನ ಸುಲ್ತಾನ ಪೇಟೆಯಲ್ಲಿ ಬ್ರಿಟೀಷರ ಒಂದು ತುಕಡಿ ಸೈನ್ಯವನ್ನು ನಿಯೋಜಿಸಲಾಗಿರುತ್ತದೆ. ಈ ಅವಧಿಯಲ್ಲಿ ಕರ್ನಲ್‌ ಕುಪೇಜ್‌ ರವರು ಅಮೃತ ಸರೋವರದ ಪಕ್ಕದಲ್ಲಿರುವ ಪ್ರದೇಶದಲ್ಲಿ ಹಣ್ಣಿನ ಗಿಡಗಳ ತೋಟವನ್ನು ನಿರ್ಮಾಣ ಮಾಡುತ್ತಾನೆ. ಈಗಲೂ ಈ ಪ್ರದೇಶದಲ್ಲಿ ವಿವಿಧ ಜಾತಿಯ ಶಿತವಲಯದ ಹಣ್ಣಿನ ಮರಗಳನ್ನು ಬೆಳೆಸಿ ಇದನ್ನು ಕುಪೇಜ್‌ ಆರ್ಚರ್ಡ್‌ ಎನ್ನುವ ಹೆಸರಿನಲ್ಲಿ ಸಂರಕ್ಷಿಸಲಾಗಿದೆ. ಈ ಭಾಗದಲ್ಲಿ ಸರೋವರ ಹಾಗೂ ಇತರೆ ನೀರಿನ ಮೂಲಗಳಿರುವ ಕಾರಣ ವಿವಿಧ ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಮೈಸೂರು ರಾಜ್ಯದ ಕಮೀಷನರ್‌ ಆಗಿದ್ದ ಸರ್‌ ಮಾರ್ಕ್‌ ಕಬ್ಬನ್‌ ರವರು ಬೆಟ್ಟದ ಮೇಲೆ ಒಂದು ವಿಶಾಲವಾದ ಬಂಗಲೆಯನ್ನು ನಿರ್ಮಾಣ ಮಾಡುತ್ತಾರೆ. 1834 ರಿಂದ 1861 ರವರೆಗೆ ಈ ಬಂಗಲೆಯನ್ನು ಬೇಸಿಗೆ ಕಾಲದಲ್ಲಿ ವಾಸದ ಮನೆಯಾಗಿ ಉಪಯೋಗಿಸುತ್ತಿದ್ದರು. ಮೊದಲು ಇದನ್ನು ಕಬ್ಬನ್‌ ಹೌಸ್‌ ರವರು ಗ್ಲೆನ್‌ ಟಿಲ್ಟ್‌ ಭವನವನ್ನು ನಿರ್ಮಾಣ ಮಾಡುತ್ತಾರೆ. 1852 ರಲ್ಲಿ ಸರ್‌ ಅಲಕ್ಸಾಂಟರ್‌ ಕನ್ನಿಂಗ್‌ ಹಾಮ್‌ ರವರು ಒಂದು ಬಂಗಲೆಯನ್ನು ನಿರ್ಮಿಸುತ್ತಾರೆ. ಈ ಬಂಗಲೆಯ ಮುಂದೆ 3 ಓಕ್‌ ಮರಗಳಿದ್ದ ಕಾರಣ ಇದನ್ನು ಓಕ್‌ ಲ್ಯಾಂಡ್ಸ್‌ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಗಾಂಧಿನಿಲಯ ಎಂದು ಕರೆಯಲಾಗುತ್ತಿದೆ. ಯೋಗ ನಂದೀಶ್ವರ ದೇವಾಲಯದ ಬಳಿ ರಿಚರ್ಡ್‌ ಸ್ಯಾಂಕಿ ರವರು ನಿರ್ಮಾಣ ಮಾಡಿರುವ ಕೊಠಡಿಗಳನ್ನು ಸ್ಯಾಂಕಿ ಬಿಲ್ಡಿಂಗ್‌ ಎಂದು ಕರೆಯಲಾಗುತ್ತಿದೆ.

 

1914 ರ ಆದೇಶದಲ್ಲಿ ಮೈಸೂರು ಸಂಸ್ಥಾನದವರು ನಂದಿಗಿರಿಧಾಮವನ್ನು ಸೂಪರಿಂಟೆಂಡೆಂಟ್‌ ಆಫ್‌ ಗೌರ್ನಮೆಂಟ್‌ ಗಾರ್ಡೆನ್ಸ್‌ ರವರ ಅಧೀನಕ್ಕೆ ಒಪ್ಪಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನಂದಿಗಿರಿಧಾಮವನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಗಿರಿಧಾಮವು ಸಮುದ್ರ ಮಟ್ಟದಿಂದ ಸುಮಾರು 4851 ಅಡಿ ಎತ್ತರದಲ್ಲಿದ್ದು, ಏಕಶಿಲೆಯಿಂದ ರೂಪಗೊಂಡಿರುತ್ತದೆ. ಸುಂದರವಾದ ನಂದಿಗಿರಿಧಾಮವು ಪಂಚಗಿರಿಗಳ ಕ್ಷೇತ್ರವಾಗಿದ್ದು, ಸುತ್ತಲೂ ನಂದಿಗಿರಿ, ದಿವ್ಯಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಹಾಗೂ ಸ್ಕಂದಗಿರಿಗಳು ಸುತ್ತುವರೆದು ಗಿರಿಧಾಮದ ಹವಾಗುಣವನ್ನು ಮತ್ತಷ್ಟು ರಮಣೀಯಗೊಳಿಸಿದೆ. ಗಿರಿಧಾಮ ಔಷಧೀಯ ಸಸ್ಯ ಸಂಪತ್ತನ್ನು ತನ್ನ ಮಡಿಲಲ್ಲಿರಿಸಿ ಕೊಂಡಿದ್ದು, ಆರೋಗ್ಯಧಾಮವೆಂದು ಕರೆಯಲ್ಪಡುತ್ತಿದ್ದು ಜನರ ಆರೋಗ್ಯ ಸುಧಾರಣೆಗಾಗಿ ಬಳಸಿಕೊಂಡಿರುವುದು ಗಮನಾರ್ಹವಾಗಿದೆ. ಗಿರಿಧಾಮದಲ್ಲಿ ಪಾಳೇಗಾರರು, ರಾಜವಂಶಗಳು ಮತ್ತು ಬ್ರಿಟೀಷ್‌ ಆಳ್ವಿಕೆಯ ಹೆಗ್ಗುರುತುಗಳಾಗಿ ಇಂದಿಗೂ ಗತಕಾಲದಲ್ಲಿನ ಕೋಟೆಗಳನ್ನು ಕಾಣಬಹುದು. ಗಿರಿಧಾಮದಲ್ಲಿ ಅರ್ಕಾವತಿ, ಪಾಲರ್‌ ನದಿಗಳು ಹಾಗೂ ಸುತ್ತಲಿನ ಬೆಟ್ಟಗಳಲ್ಲಿ ಉತ್ತರ ಪಿನಾಕಿನಿ ಹಾಗೂ ದಕ್ಷಿಣ ಪಿನಾಕಿನಿ, ಚಿತ್ರಾವತಿ ನದಿಗಳು ಉಗಮಗೊಳ್ಳುವ ಸ್ಥಾನವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಗಿರಿಧಾಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಯು ಸಕ್ರಿಯವಾಗಿ ಕಾರ್ಯೋನ್ಮುಖವಾಗಿವೆ.

ನಂದಿ ಗಿರಿಧಾಮದ ಪ್ರೇಕ್ಷಣೀಯ ಸ್ಥಳಗಳು

   

ಶ್ರೀ ಯೋಗನಂಧೀಶ್ವರ ದೇವಾಲಯ: ನಂದಿ ಗಿರಿಧಾಮದ ಶಿಖರದಲ್ಲಿ ಗಂಗರ ಕಾಲದಲ್ಲಿ (ಸುಮಾರು 9-10 ನೇ ಶತಮಾನ)  ನಿರ್ಮಾಣವಾಗಿರುವ ಯೋಗನಂಧೀಶ್ವರ ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ಒಳಗೊಂಡಿದೆ. ಈ ದೇವಾಲಯದ ದ್ವಾರಪಾಲಕ ಪ್ರತಿಮೆಗಳನ್ನು ಶ್ರೀ ಕೃಷ್ಣದೇವರಾಯ ದಾನವಾಗಿ ನೀಡಿರುತ್ತಾರೆ.

ಶ್ರೀ ಗವಿ ವೀರಭದ್ರೇಶ್ವರ ದೇವಾಲಯ: ನಂದಿ ಬೆಟ್ಟಕ್ಕೆ ಹತ್ತುವ ಮೆಟ್ಟಿಲು ದಾರಿಯಲ್ಲಿ ಈ ದೇವಾಲಯವಿದೆ. ಇದನ್ನು 11ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಿರಬಹುದೆಂದು ತಿಳಿದು ಬಂದಿದೆ. ಇಲ್ಲಿರುವ ಶಾಸನದಲ್ಲಿ 1397 ರಲ್ಲಿ ಕನ್ನಪ್ಪರಾಯನ ಮಗನಾದ ದೇವಯ್ಯನು ಬಾಗಿಲು ಮಾಡಿಸಿದನೆಂದು ಲಿಖಿತವಾಗಿದೆ.

   
   
ಶ್ರೀ ನೆಲ್ಲಿಕಾಯಿ ಬಸವಣ್ಣ: ನೆಲ್ಲಿಕಾಯಿ ಬಸವಣ್ಣ 10 ಅಡಿ ಉದ್ದ, 6 ಅಡಿ ಎತ್ತರದ ಚೋಳರ ಶೈಲಿಯಲ್ಲಿ ಕೆತ್ತಿರುವ ಸುಂದರವಾದ ನಂದಿ ಶಿಲ್ಪ ಗಿರಿಧಾಮದ ಪೂರ್ವ ಭಾಗದಲ್ಲಿ ಇದೆ. ಇದರ ಮುಂದೆ ನೆಲ್ಲಿಕಾಯಿಯ ಮರ ಇರುವುದರಿಂದ ನೆಲ್ಲಿಕಾಯಿ ಬಸವಣ್ಣ ಎಂಬ ಹೆಸರು ರೂಢಿಯಲ್ಲಿದೆ. ಶಿಲಾ ಮಂಟಪದ ಮಧ್ಯೆ ನಂದಿಯು ವಿರಾಜಮಾನವಾಗಿದೆ. ನಂದಿ ಮಂಟಪ: ಮೆಟ್ಟಿಲು ದಾರಿಯಲ್ಲಿ ಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರು ನಂದಿ ಮಂಟಪದ ಮುಖಾಂತರ ಹಾಗು ಹೋಗುವ ಪದ್ಧತಿಯಿತ್ತು.
   
   
ಟಿಪ್ಪುವಿನ ವಸತಿ ಗೃಹ: ಕೋಟೆಯ ಒಳಗಡೆ ಪ್ರವೇಶ ದ್ವಾರದ ಒಂದು ಶಿಖರದ ಮೇಲೆ ಕಟ್ಟಿರುವ 2 ಅಂತಸ್ತಿನ ಆಯತಕಾರದ 12x7 ಮೀ ಅಳತೆಯ ಕಟ್ಟಡವಾಗಿದೆ. ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿರುವ ಈ ಕಟ್ಟಡವು ಕೆಲವು ವಿಭಜಕಗಳಿಂದ ಕೂಡಿ ಸಂಕೀರ್ಣವಾಗಿದೆ. ಟಿಪ್ಪು ಸುಲ್ತಾನನು ಭೇಟೆಗಾಗಿ ಬಂದಾಗ ಇಲ್ಲಿ ಉಳಿದುಕೊಳ್ಳುತ್ತಿದ್ದನ್ನು ಎಂದು ಹೇಲುವರು. ಟಿಪ್ಪು ಡ್ರಾಪ್:‌ ಟಿಪ್ಪು ಸುಲ್ತಾನನ ಕಾಲದಲ್ಲಿ ತಪ್ಪಿತಸ್ತರು ಮತ್ತು ಖೈದಿಗಳನ್ನು ತಳ್ಳುತ್ತಿದ್ದ ಘೋರ ಕಂದಕ “ಟಿಪ್ಪು ಡ್ರಾಪ್” ಎಂದು ಪ್ರಸಿದ್ಧಿಯಾಗಿದೆ. ಶ್ರೀ ಯೋಗನಂಧೀಶ್ವರಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಬಂಡೆಯ ತುದಿಯಲ್ಲಿ ಟಿಪ್ಪು ಡ್ರಾಪ್‌ ಇರುತ್ತದೆ.
   
   
ಅಮೃತ ಸರೋವರ: ಸ್ವಚ್ಛ ತಿಳಿ ನೀರಿನಿಂದ ಕೂಡಿರುವ ಸರ್ವ ಋತು ಸರೋವರ. ಹಿಂದಿನ ಕಾಲದಲ್ಲಿ ಗಿರಿಧಾಮದ ನೀರಿನ ಅವಶ್ಯಕತೆಗೆ ಈ ಸರೋವರವನ್ನು ಅವಲಂಭಿಸಲಾಗಿತ್ತು. ಪಾಲಾರ್‌ ನದಿ ಉಗಮಸ್ಥಾನ: ಪಾಲಾರ್‌ (ಕ್ಷೀರ ನದಿ) ನದಿಯು ಗಿರಿಧಾಮದಲ್ಲಿ ಉಗಮವಾಗಿ ದಕ್ಷಿಣಾಭಿಮುಖವಾಗಿ ಹರಿದು ತಮಿಳುನಾಡಿನಲ್ಲಿ ಕಾವೇರಿ ನದಿ ಸೇರಿಕೊಳ್ಳುತ್ತದೆ.
   
   
ಅರ್ಕಾವತಿ ನದಿ ಉಗಮ ಸ್ಥಾನ: ಅರ್ಕಾವತಿ ನದಿಯು ಗಿರಿಧಾಮದಲ್ಲಿ ಉಗಮವಾಗಿ ಪಶ್ಚಿಮಾಭಿಮುಖವಾಗಿ ಹರಿದು ಸಂಗಮದಲ್ಲಿ ಕಾವೇರಿಯನ್ನು ಸೇರಿಕೊಳ್ಳುತ್ತದೆ. ಈ ನದಿಗೆ ಮಾಗಡಿಯ ತಿಪ್ಪಗೊಂಡನಹಳ್ಳಿಯಲ್ಲಿ ಜಲಾಶಯ ನಿರ್ಮಿಸಲಾಗಿದೆ. ಕುದುರೆ ಮೆಟ್ಟಿಲು: ಹಿಂದಿನ ಕಾಲದಲ್ಲಿ ಕುದುರೆಗಳ ಮೇಲೆ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದ ಮಾರ್ಗವೆಂದು ತಿಳಿದು ಬಂದಿದೆ. ಇದನ್ನು ಕೂಲಿ ದಾರಿ ಎಂದು ಕರೆಯುತ್ತಿದ್ದರು.
   
ಗಾಂಧಿ ನಿಲಯ: 1927 ಹಾಗೂ 1936 ರಲ್ಲಿ ಮಹಾತ್ಮಗಾಂಧಿಯವರು ಒಟ್ಟು 66 ದಿನ ಈ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದಿರುತ್ತಾರೆ. ಪ್ರಸ್ತುತ ಇದನ್ನು ಗಣ್ಯರ ಅತಿಥಿ ಗೃಹವಾಗಿ ಡಿ.ಪಿ.ಎ.ಆರ್‌ (ಶಿಷ್ಠಾಚಾರ) ವಿಭಾಗದಿಂದ ಕಾಯ್ದಿರಿಸಲಾಗುತ್ತಿದೆ. ನೆಹರು ನಿಲಯ (ಕಬ್ಬನ್‌ ಹೌಸ್): ಸರ್.ಮಾರ್ಕ್‌ ಕಬ್ಬನ್‌ ಕೆ.ಸಿ.ಬಿ ರವರು 1834 ರಿಂದ 1961 ರವರೆಗೆ ಮೈಸೂರು ರಾಜ್ಯದ ಕಮೀಷನರ್‌ ಆಗಿದ್ದು, ಅವರು ಬೇಸಿಗೆಯ ವಾಸದ ಬಂಗಲೆಯನ್ನಾಗಿ ಉಪಯೋಗಿಸುತ್ತಿದ್ದರು. 1986 ರಲ್ಲಿ ಸಾರ್ಕ್‌ ಸಮ್ಮೇಳನವು ಈ ಬಂಗಲೆಯಲ್ಲಿ ನಡೆಯಿತು. ಪ್ರಸ್ತುತ ಇದನ್ನು ಸಾರ್ವಜನಿಕ ಅತಿಥಿ ಗೃಹವನ್ನಾಗಿ ಪರಿವರ್ತಿಸಲಾಗಿದೆ.
   
   
ಬ್ಯಾಂಬು ಹೌಸ್: ಬೊಂಬು ಮತ್ತು ಕಬ್ಬಿಣವನ್ನು ಉಪಯೋಗಿಸಿ ಈ ವಿಶಿಷ್ಟ ರೀತಿಯ ಅಟ್ಟಣಿಗೆಗಳನ್ನು ಪ್ರವಾಸಿಗಳ ಅನುಕೂಲಕ್ಕಾಗಿ ನಿರ್ಮಿಸಿದ್ದು, ಇದರ ಮೇಲೆ ನಡೆದಾಡುವುದು ಆನಂದವನ್ನು ನೀಡುತ್ತದೆ. ಇದನ್ನು ಸ್ಕೈವಾಕ್‌ ಎಂದು ಕರೆಯುತ್ತಾರೆ.  
   

ನಂದಿ ಗಿರಿಧಾಮಕ್ಕೆ ಬಸ್‌ ಸೌಲಭ್ಯ:

ಚಿಕ್ಕಬಳ್ಳಾಪುರದಿಂದ ನಂದಿ ಗಿರಿಧಾಮಕ್ಕೆ:

ಬೆಳಿಗ್ಗೆ 8-00 ಗಂಟೆಗೆ, ಬೆಳಿಗ್ಗೆ 10.00 ಗಂಟೆಗೆ,

ಮದ್ಯಾಹ್ನ 12.00 ಗಂಟೆಗೆ, ಮದ್ಯಾಹ್ನ 2.30 ಗಂಟೆಗೆ

ಸಂಜೆ 4.30 ಗಂಟೆಗೆ, ಸಂಜೆ 5.45 ಗಂಟೆಗೆ

ಬೆಂಗಳೂರಿನಿಂದ ನಂದಿ ಗಿರಿಧಾಮಕ್ಕೆ:

ಬೆಳಿಗ್ಗೆ 8-30 ಗಂಟೆಗೆ (ದೊಡ್ಡಬಳ್ಳಾಪುರದ ಮಾರ್ಗವಾಗಿ)

ದೊಡ್ಡಬಳ್ಳಾಪುರದಿಂದ ನಂದಿಗಿರಿಧಾಮಕ್ಕೆ:

ಮದ್ಯಾಹ್ನ 3-30 ಗಂಟೆಗೆ

ನಂದಿ ಗಿರಿಧಾಮದಿಂದ ಚಿಕ್ಕಬಳ್ಳಾಪುರಕ್ಕೆ

ಬೆಳಿಗ್ಗೆ 9-00 ಗಂಟೆಗೆ, ಬೆಳಿಗ್ಗೆ 11-00 ಗಂಟೆಗೆ

ಮದ್ಯಾಹ್ನ 1.30 ಗಂಟೆಗೆ, ಮದ್ಯಾಹ್ನ 3.30 ಗಂಟೆಗೆ

ಸಂಜೆ 5.30 ಗಂಟೆಗೆ, ಸಂಜೆ 6.45 ಗಂಟೆಗೆ

ನಂದಿ ಗಿರಿಧಾಮದಿಂದ ದೊಡ್ಡಬಳ್ಳಾಪುರಕ್ಕೆ:

ಬೆಳಿಗ್ಗೆ 10.30 ಗಂಟೆಗೆ

ಸಂಜೆ 4.30 ಗಂಟೆಗೆ

ನಂದಿ ಗಿರಿಧಾಮದಲ್ಲಿರುವ ಅತಿಥಿ ಗೃಹಗಳ ವಿವರ:

ತೋಟಗಾರಿಕೆ ಇಲಾಖೆ: ನೆಹರು ನಿಲಯ- www.nadihillsreservations.in

ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ : ಹೊಸ ಕಾಟೇಜ್‌ ಗಳು- www.kstdc.co

ಲೋಕೋಪಯೋಗಿ ಇಲಾಖೆ : ಸಹಾಯಕ ಕಾರ್ಯಪಾಲಕ ಅಭಿಯಂತರರು, ಚಿಕ್ಕಬಳ್ಳಾಪುರ

ಡಿ.ಪಿ.ಎ.ಆರ್‌ (ಶಿಷ್ಠಾಚಾರ): ಗಾಂಧಿ ನಿಲಯ- ಡಿ.ಪಿ.ಎ.ಆರ್‌, ಬೆಂಗಳೂರು (ಗಣ್ಯ ವ್ಯಕ್ತಿಗಳಿಗೆ ಮಾತ್ರ)
 

ನಂದಿ ಗಿರಿಧಾಮಕ್ಕೆ ಪ್ರವೇಶ ಸಮಯ :

ಪ್ರವಾಸಿಗರಿಗೆ : ಬೆಳಿಗ್ಗೆ 6-00 ರಿಂದ ಸಂಜೆ 6-00 ರವರೆಗೆ.

ಕೊಠಡಿ ಕಾಯ್ದಿರಿಸಿರುವವರಿಗೆ : ಬೆಳಿಗ್ಗೆ 6-00 ರಿಂದ ಸಂಜೆ 8-00 ರವರೆಗೆ.

ನಂದಿ ಗಿರಿಧಾಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ವಿಶೇಷಾಧಿಕಾರಿಗಳ ಕಛೇರಿ,

ತೋಟಗಾರಿಕೆ ಇಲಾಖೆ,

ನಂದಿ ಗಿರಿಧಾಮ, ಚಿಕ್ಕಬಳ್ಳಾಪುರ.

e-mail : nandihill.so@gmail.com         

website : www.nadihillsreservations.in

 

ನಂದಿ ಗಿರಿಧಾಮಕ್ಕೆ ಹತ್ತಿರವಿರುವ ಪ್ರೇಕ್ಷಣೀಯ ಸ್ಥಳಗಳು :

ಶ್ರೀ ಭೋಗನಂದೀಶ್ವರ ದೇವಾಲಯ, ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು (13 ಕಿ.ಮೀ)

ಸರ್‌ ಎಂ ವಿಶ್ವೇಶ್ವರಯ್ಯ ನವರ ಸಮಾಧಿ ಮತ್ತು ಮ್ಯೂಜಿಯಂ, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು (15 ಕಿ.ಮೀ)

ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಸ್ವಾಮಿ ದೇವಾಲಯ, ಘಾಟಿ, ದೊಡ್ಡಬಳ್ಳಾಪುರ ತಾಲ್ಲೂಕು (20 ಕಿ.ಮೀ)

ಶ್ರೀ ರಂಗನಾಥಸ್ವಾಮಿ ದೇವಾಲಯ, ರಂಗಸ್ಥಳ, ಚಿಕ್ಕಬಳ್ಳಾಪುರ ತಾಲ್ಲೂಕು (27 ಕಿ.ಮೀ)

ಶ್ರೀ ಅಮರನಾರಾಯಣಸ್ವಾಮಿ ದೇವಾಲಯ, ಶ್ರೀಕ್ಷೇತ್ರ ಕೈವಾರ, ಚಿಂತಾಮಣಿ ತಾಲ್ಲೂಕು (45 ಕಿ.ಮೀ)

ಜಕ್ಕಲ ಮೊಡಗು ಜಲಾಶಯ, ಚಿಕ್ಕಬಳ್ಳಾಪುರ ತಾಲ್ಲೂಕು (35 ಕಿ.ಮೀ)

ಶ್ರೀನಿವಾಸ ಸಾಗರ ಜಲಾಶಯ, ಚಿಕ್ಕಬಳ್ಳಾಪುರ ತಾಲ್ಲೂಕು (35 ಕಿ.ಮೀ)

ಆವಲಬೆಟ್ಟ, ಚಿಕ್ಕಬಳ್ಳಾಪುರ ತಾಲ್ಲೂಕು (35 ಕಿ.ಮೀ)

 

ಇತ್ತೀಚಿನ ನವೀಕರಣ​ : 11-08-2021 04:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080